ಬಾಘ್
ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಕುಕ್ಷಿ ತಾಲ್ಲೂಕಿನ ಒಂದು ಊರು. ಜನಸಂಖ್ಯೆ 5,079 (1981). ವಿಂಧ್ಯ ಪರ್ವತದ ತಪ್ಪಲಿನಲ್ಲಿರುವ ಪುರಾತನ ಗುಹೆಗಳಿಂದಾಗಿ ಈ ಊರು ಪ್ರಸಿದ್ಧ. ಆ ಗುಹೆಗಳನ್ನು ಬಾಘ್ ಗುಹೆಗಳೆಂದೇ ಕರೆಯುತ್ತಾರೆ. ಬೌದ್ಧಧರ್ಮ ಭಾರತದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅಜಂತದಲ್ಲಿರುವಂತೆ ಒಂಬತ್ತು ಗುಹೆಗಳನ್ನು ಇಲ್ಲಿ ಕೊರೆಯಲಾಗಿದೆ. ಇವುಗಳಲ್ಲಿ ಐದು ಶಿಥಿಲವಾಗಿ ನಾಲ್ಕು ಮಾತ್ರ ಉತ್ತಮ ಸ್ಥಿತಿಯಲ್ಲಿವೆ. ಇವನ್ನು ಬೌದ್ಧ ಭಿಕ್ಷುಗಳ ಬಿಡಾರಕ್ಕೆ ಉಪಯೋಗಿಸಲಾಗುತ್ತಿತ್ತೆಂದೂ ಇವುಗಳ ನಿರ್ಮಾಣ ಸುಮಾರು 5ನೆಯ ಶತಮಾನದಿಂದ 8ನೆಯ ಶತಮಾನದ ತನಕ ಅಂದರೆ ಗುಪ್ತರ ಮತ್ತು ಅನಂತರ ಕಾಲದ್ದೆಂದೂ ಹೇಳುವರು. ಅಜಂತದಲ್ಲಿರುವಂತೆ ಇಲ್ಲಿಯೂ ಗೋಡೆಗಳ ಮೇಲೆ ಮತ್ತು ಛಾವಣಿಯಲ್ಲಿ ಬೌದ್ಧ ಧರ್ಮದ ಮಹಾಯಾನಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬರೆಯಲಾಗಿದೆ. ಇವುಗಳ ಶೈಲಿ ಬಹುಮಟ್ಟಿಗೆ ಅಜಂತಾ ಚಿತ್ರಗಳ ಶೈಲಿಯಂತಿದ್ದರೂ ಅಷ್ಟು ಹೆಚ್ಚಿನ ವರ್ಣವಿನ್ಯಾಸ ಈ ಚಿತ್ರಗಳಲ್ಲಿಲ್ಲ. ಇಲ್ಲಿ ಬುದ್ಧ ಹಾಗೂ ಅವನ ಶಿಷ್ಯರು, ರಾಜಾಸ್ಥಾನಗಳು ಇವನ್ನು ಚಿತ್ರಿಸಿರುವುದಲ್ಲದೆ, ಸಾಲು ಸಾಲಾಗಿ ಹೋಗುತ್ತಿರುವ ಕುದುರೆ ಸವಾರರು, ಆನೆಯ ಹಿಂಡುಗಳು, ವಾದ್ಯಗಾರರಿಂದ ಸುತ್ತುವರಿಯಲ್ಪಟ್ಟ ನರ್ತಕಿಯರು ಈ ಬಗೆಯ ದೊಡ್ಡ ಸಮೂಹಗಳನ್ನು ರೂಪಿಸಿರುವ ಚಿತ್ರಗಳು ಈ ಗುಹೆಗಳಲ್ಲಿವೆ. ಇವುಗಳಲ್ಲಿ ಕಂಡುಬರುವ ವಿನ್ಯಾಸ, ಸಮತೋಲನ ದೃಷ್ಟಿ ಪ್ರಶಂಸನೀಯ. ಅಜಂತದಲ್ಲಿರುವಂತೆ ಚಚ್ಚೌಕದ ಆವರಣಕ್ಕಿಂತಲೂ ಗೋಲಾಕಾರದ ಅಥವಾ ಅಂಡಾಕಾರದ ಪರಿಧಿಯಲ್ಲಿ ಚಿತ್ರಗಳನ್ನು ಇಲ್ಲಿ ಬಿಡಿಸಲಾಗಿರುವುದು ಗುರುತಿಸಬೇಕಾದ ವಿಷಯ. 		
	(ಕೆ.ಎಸ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ